ಮನಿಲ
ಫಿಲಿಪೀನ್ಸ್ ಗಣರಾಜ್ಯದ ಅತ್ಯಂತ ದೊಡ್ಡ ಬಂದರು ನಗರ ಮತ್ತು ರಾಷ್ಟ್ರದ ಆರ್ಥಿಕ ಹಾಗೂ ಸಾಂಸ್ಕøತಿಕ ಕೇಂದ್ರ. ಫಿಲಿಪೀನ್ಸ್‍ನ ಅಧಿಕೃತ ರಾಜಧಾನಿ ಕೇಸಾನ್ ನಗರವಾದರೂ ಮನಿಲ ಆಡಳಿತ ಕೇಂದ್ರವಾಗಿ ಮುಂದುವರಿದಿದೆ. ಮನಿಲ ಲೂಜಾನ್ ದ್ವೀಪದ ಪೂರ್ವತೀರದಲ್ಲಿ ಪಾಸಿಗ್ ನದಿಯ ಮುಖಜ ಭೂಮಿಯಲ್ಲಿದೆ. ಮನಿಲ ನಗರ ವಿಸ್ತೀರ್ಣ 30 ಚಕಿಮೀ. ರಾಜಧಾನಿ ಒಳಗೊಂಡ ಮನಿಲ ಮೆಟ್ರೋಪಾಲಿಟನ್ ಪ್ರದೇಶದ ವಿಸ್ತೀರ್ಣ 378 ಚಕಿಮೀ. ಒಟ್ಟು ಜನಸಂಖ್ಯೆ 5,925, 884 (1980).

ಮನಿಲ ಎಂಬ ಹೆಸರು ಈ ಪ್ರದೇಶದಲ್ಲಿ ಹೆಚ್ಚು ಬೆಳೆಯುವ ನಿಲಾದ್ ಎಂಬ ಒಂದು ಹೂವಿನ ಹೆಸರಿನಿಂದ ಬಂದಿದ್ದು ಮೊದಲು ಮೈನಿಲಾದ ಎಂಬುದಾಗಿ ಅನಂತರ ಮೈನಿಲ ಆಯಿತೆಂದು ತಿಳಿದುಬರುತ್ತದೆ. ಹದಿನಾರನೆಯ ಶತಮಾನದಲ್ಲಿ ಮನಿಲ ಮುಸ್ಲಿಮ್ ಅಧೀನದಲ್ಲಿದ್ದ ಒಂದು ದುರ್ಗವಾಗಿತ್ತು. 1571ರಲ್ಲಿ ಸ್ಪೇನಿನ ಗವರ್ನರ್ ಜನರಲ್ ಇದನ್ನು ವಶಪಡಿಸಿಕೊಂಡ. ಏಷ್ಯ ಮತ್ತು ಅಮೆರಿಕ ಖಂಡಗಳ ಕೂಡು ಮಾರ್ಗದಲ್ಲಿದ್ದ ಈ ಬಂದರು ನಗರ ಬರಬರುತ್ತ ಅತ್ಯಂತ ಪ್ರಾಮುಖ್ಯ ಪಡೆದು ತ್ವರಿತಗತಿಯಲ್ಲಿ ಅಭಿವೃದ್ದಿ ಹೊಂದಿತು. ಇಲ್ಲಿಯ ಕೊಲ್ಲಿಗೆ ಮನಿಲಕೊಲ್ಲಿ ಎಂಬ ಹೆಸರು ಬಂತು. 1762ರಿಂದ 1764ರ ತನಕ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು. ಪ್ಯಾರಿಸ್ ಶಾಂತಿ ಒಪ್ಪಂದದ ಪ್ರಕಾರ ಮತ್ತೆ ಇದನ್ನು ಸ್ಪೇನ್‍ಗೆ ವಹಿಸಿಕೊಡಲಾಯಿತು.  1898ರಲ್ಲಿ ಮನಿಲ ಕೊಲ್ಲಿಯಲ್ಲಿ ಸ್ಪೇನ್ ಮತ್ತು ಅಮೆರಿಕಗಳ ನಡುವೆ ನೌಕಾಯುದ್ಧದಲ್ಲಿ ಸ್ಪೇನ್ ಸೋತದ್ದರಿಂದ ಮನಿಲವೂ ಸೇರಿದಂತೆ ಇಡೀ ಫಿಲಿಪೀನ್ಸ್ ಅಮೆರಿಕದ ವಶವಾಯಿತು. ಮನಿಲ ಅಮೆರಿಕದ ಆಡಳಿತ ಕೇಂದ್ರ ನಗರವಾಯಿತು. ಮುಂದೆ 1942ರಿಂದ 1945ರ ತನಕ ಜಪಾನಿಯರು ಈ ನಗರವನ್ನು ಆಕ್ರಮಿಸಿಕೊಂಡಿದ್ದರು. 1946ರಿಂದ 1948ರ ತನಕವೂ ಮನಿಲ ಫಿಲಿಪೀನ್ಸ್‍ಗೆ ರಾಜಧಾನಿಯಾಗಿತ್ತು. ತರುವಾಯ ಮನಿಲದ ಉಪನಗರವಾದ ಕೇಸಾನನ್ನು ರಾಜಧಾನಿಯಾಗಿ ಮಾಡಿಕೊಂಡರೂ ಮನಿಲದ ಪ್ರಾಮುಖ್ಯ ಕಡಿಮೆಯಾಗಲಿಲ್ಲ.

ಮನಿಲ ನಗರ ಪ್ರಪಂಚದ ಅತಿದೊಡ್ಡ ಸ್ವಾಭಾವಿಕ ಬಂದರುಗಳಲ್ಲೊಂದು. ಇದು ವಿಸ್ತಾರವಾದ ಸಮುದ್ರದ ಒಳಸರಿಕೆಯಲ್ಲಿದ್ದು ಅತ್ಯಂತ ಸುರಕ್ಷಿತವೆನಿಸಿದೆ. ಫಿಲಿಪೀನ್ಸ್‍ನ ಬಹುತೇಕ ಆಮದು ಮತ್ತು ರಫ್ತು ಇದರ ಮೂಲಕ ನಡೆಯುತ್ತವೆ. ಮನಿಲದಲ್ಲಿ ಜೂನ್‍ನಿಂದ ನವೆಂಬರ್ ತನಕ ಮಳೆಗಾಲ. ಡಿಸೆಂಬರ್‍ನಿಂದ ಮೇ ತನಕ ಬೇಸಗೆ, ವಾರ್ಷಿಕ ಮಾಧ್ಯ ಉಷ್ಣತೆ 270ಸಿ, ವಾರ್ಷಿಕ ಸರಾಸರಿ ಮಳೆ 2083 ಮಿಮೀ.

ಜನಸಂಖ್ಯೆಯ ಒತ್ತಡದಿಂದಾಗಿ ನಗರ ಪ್ರದೇಶ ಎಲ್ಲ ದಿಕ್ಕುಗಳಲ್ಲೂ ವಿಸ್ತರಿಸಿದೆ.  ಸ್ಪೇನಿನವರು ಕಟ್ಟಿದ್ದ ಹಳೆನಗರದ ಸ್ಯಾಂಟಿಯಾಗೂ ಕೋಟೆ ಪ್ರದೇಶದಲ್ಲಿ ಇಂದು ರಿಸಾಲ್ ಉದ್ಯಾನವಿದೆ. ಇಲ್ಲಿ ರಾಷ್ಟ್ರೀಯ ವೀರ ಹಾಗೂ ಹುತಾತ್ಮ ರಿಸಾಲ್‍ನ (1896) ಕೃತಿಗಳು ಮತ್ತು ವ್ಯಕ್ತಿತ್ವವನ್ನು ಪರಿಚಯಿಸುವ ವಸ್ತುಸಂಗ್ರಹಾಲಯ ಇದೆ. ಸಮೀಪದಲ್ಲೇ ಜಪಾನಿ ಮತ್ತು ಚೀನಿ ಉದ್ಯಾನಗಳೂ ಬಯಲು ರಂಗ ಮಂದಿರವೂ ಇವೆ. ಮನಿಲ ಕೊಲ್ಲಿಗೆ ಹೊಂದಿಕೊಂಡಂತೆ ವಿಹಾರ ಸ್ಥಳವಿದೆ.
ಮನಿಲದಲ್ಲಿ ಸಸ್ಯ ಮತ್ತು ಪ್ರಾಣಿವಿಜ್ಞಾನದ ಹೆಚ್ಚಿನ ಅಧ್ಯಯನಕ್ಕೆ ನೆರವಾಗುವ ಉದ್ಯಾನಗಳಿವೆ, ಇಲ್ಲಿಯ ರಾಷ್ಟ್ರೀಯ ಗ್ರಂಥಾಲಯದಲ್ಲಿ ಮಾನವ ಮತ್ತು ಪ್ರಾಕ್ತನ ಶಾಸ್ತ್ರಗಳಿಗೆ ಸೇರಿದ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಭೂವಿಜ್ಞಾನ ವಸ್ತುಸಂಗ್ರಹಾಲಯ, ಅಕ್ವೇರಿಯಮ್ ಮುಂತಾದವು ಆಕರ್ಷಣೀಯವಾಗಿವೆ. ಜಪಾನೀಯರ ವಿರುದ್ಧ ಹೋರಾಡಿ ಮಡಿದ ಅಮೆರಿಕನ್ ಸೈನಿಕರ ಸ್ಮರಣಾರ್ಥ ಸಮಾಧಿ ನಿರ್ಮಿಸಲಾಗಿದೆ. ಮಲಕನ್ಯಾಂಗ್ ಅರಮನೆ ಈಗ ಅಧ್ಯಕ್ಷರ ನಿವಾಸ, ಸಂಸತ್ ಭವನ, ಸರ್ವೋಚ್ಚ ನ್ಯಾಯಾಲಯ ಇವೆ. ಮನಿಲ ನಗರದಲ್ಲಿ ನಗರ ಪಾಲಿಕೆ ಆಡಳಿತವಿದೆ. ಈ ಮಂಡಲಿಯಲ್ಲಿ 20 ಜನ ಸದಸ್ಯರಿರುತ್ತಾರೆ. 1984 ರಲ್ಲಿ ಭಾರತೀಯ ಮೂಲದ ಭಗತ್ ಸಿಂಗ್ ಎಂಬುವರು ಇಲ್ಲಿಯ ಮೇಯರ್ ಆಗಿದ್ದರು. ಇಲ್ಲಿ ಶೇಕಡಾ 96 ಅಕ್ಷರಸ್ಥರಿದ್ದಾರೆ; ಹೆಚ್ಚು ಜನರು ವ್ಯಾಪಾರ ಉದ್ಯೋಗಗಳಲ್ಲಿ ನಿರತರು. ಇಲ್ಲಿಯ ಯುವತಿಯರು ಅಂಗಡಿ ಮಳಿಗೆಗಳಲ್ಲಿ, ಹೋಟೆಲು ಉದ್ಯಮಗಳಲ್ಲಿ, ಸಾಕಷ್ಟು ಉದ್ಯೋಗ ಹಿಡಿದಿದ್ದಾರೆ. ಜೊತೆಗೆ ಬಸ್ ಚಾಲಕರಾಗಿಯೂ ಕಾರ್ಯ ನಿರ್ವಹಿಸುತ್ತಾರೆ. ಮನಿಲದ ಆರ್ಥಿಕ ಚಟುವಟಿಕೆಯ ಜೀವನಾಡಿ ವಿದೇಶಿ ಪ್ರವಾಸಿಗರನ್ನೆಬಹುದು. ಅಮೆರಿಕ ಮತ್ತು ಐರೋಪ್ಯ ಪ್ರವಾಸಿಗರು ಈ ನಗರಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಾರೆ.

ಮನಿಲದ ಅನೇಕ ಕೈಗಾರಿಕೆಗಳಲ್ಲಿ ಮೀನು ಸಂಸ್ಕರಣ, ಆಹಾರ ಡಬ್ಬೀಕರಣ, ಕಾಗದ, ರಬ್ಬರ್, ಔಷಧ ಹಾಗೂ ರಾಸಾಯನಿಕ ವಸ್ತು ತಯಾರಿಕೆಗೆ ಸಂಬಂಧಿಸಿದ ಉದ್ಯಮಗಳು ಮುಖ್ಯವಾದವು. ನಗರದಲ್ಲಿ ಮುಖ್ಯ ರೈಲು ನಿಲ್ದಾಣವಿದೆ. ಅಂತಾರಾಷ್ಟ್ರೀಯ ಹಾಗೂ ಒಳನಾಡಿನ ವಿಮಾನ ಸಾರಿಗೆಯೂ ಇದೆ. ಮನಿಲ ಇಂದು ಪ್ರಪಂಚದ ಆಕರ್ಷಣೀಯ ನಗರಗಳಲ್ಲೊಂದಾಗಿದೆ.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ